
ಸಹೃದಯ ಸಜ್ಜನ ಕೂಟ ಸಮಾಜ ಬಾಂಧವರೇ,
ನಮ್ಮ ಕೂಟ ಬ್ರಾಹ್ಮಣರು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ಶ್ರೀ ಗುರು ನರಸಿಂಹ ದೇವರನ್ನು ಗುರುವಾಗಿ ಪೂಜಿಸುವ ಅತ್ಯಂತ ಶ್ರೇಷ್ಠವಾದ ಶ್ರೌತ ಸ್ಮಾರ್ತ ಕ್ರಮದ ಬ್ರಾಹ್ಮಣ ವರ್ಗ ನಮ್ಮದು. ನಮ್ಮ ಕೂಟ ಸಮಾಜವು ಸಂಘಟಿತವಾಗಿ ಇದ್ದು ಒಗ್ಗಟ್ಟಿನಿಂದ ಇರಬೇಕು ಹಾಗೂ ನಮ್ಮಲ್ಲಿರುವ ಆರ್ಥಿಕವಾಗಿ ಹಿಂದುಳಿದಂತ ನಮ್ಮ ಸಮಾಜವನ್ನು ಎತ್ತಿ ಹಿಡಿಯಬೇಕು ಎಂಬ ಸದುದ್ದೇಶವನ್ನು ಹೊಂದಿಕೊಂಡು ನಮ್ಮ ಸಮಾಜದ ಹಿರಿಯರು 1952 ರಲ್ಲಿ ಸಮಗ್ರವಾಗಿ ಚಿಂತಿಸಿ ಸಭೆ ಸೇರಿದರು ನಂತರ 1954ರಲ್ಲಿ ಕೂಟ ಮಹಾ ಜಗತ್ತು ಎಂಬ ನಾಮಾಂಕಿತದೊಂದಿಗೆ ಸಂಸ್ಥೆಯನ್ನು ನಿಬಂಧನೆ ಸಹಿತ ನೋಂದಾಯಿಸಲಾಯಿತು.
ಮೊದಲಿಗೆ ಸಾಲಿಗ್ರಾಮ ಮಂಗಲಪಾಡಿ, ಬೆಂಗಳೂರು ಮದ್ರಾಸು ಹಾಗೂ ನಮ್ಮ ಮಂಗಳೂರು ಅಂಗಸಂಸ್ಥೆ ಸ್ಥಾಪಿಸಲ್ಪಟ್ಟಿತು ಎಂದು ಹೇಳಲು ಹೆಮ್ಮೆಪಡುತ್ತೇನೆ. ಪ್ರಾರಂಭದಲ್ಲಿ ಕೀರ್ತಿಶೇಷ ಕೋಟ ವಾಸುದೇವ ಕಾರಂತರು ನಮ್ಮ ಅಂಗ ಸಂಸ್ಥೆಯ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಎಲ್ಲರನ್ನೂ ಒಟ್ಟು ಸೇರಿಸುವ ಪ್ರಯತ್ನವನ್ನು ಮಾಡಿದರು. ಸ್ವಂತ ಕಟ್ಟಡ ಇಲ್ಲದೇ ಇರುವ ಆ ಸಮಯದಲ್ಲಿ ಅಂಗ ಸಂಸ್ಥೆಯು ಚಕ್ರಪಾಣಿ ದೇವಸ್ಥಾನ ಮಂಗಳದೇವಿ ದೇವಸ್ಥಾನ ಮೊದಲಾದ ಕಡೆಗಳಲ್ಲಿ ಸಭೆ ಸೇರಿ ಚರ್ಚಿಸುತ್ತಿದ್ದರು.
ತದ ನಂತರದಲ್ಲಿ ಶ್ರೀಮತಿ ವಿಜಯಲಕ್ಷ್ಮಿಯವರು ದಾನವಾಗಿ ನೀಡಿದ ಜಾಗ ಪಾಂಡೇಶ್ವರ ಮಹಾಲಿಂಗೇಶ್ವರ ದೇವಳದ ಸಮೀಪ ಹಾಗು ದಾನಿಗಳ ಸಹಕಾರದಿಂದ ಸ್ವಂತ ಕಟ್ಟಡವನ್ನು ಹೊಂದಿ, ಎಲ್ಲಾ ಕಾರ್ಯಕಲಾಪಗಳು ಅಲ್ಲೇ ನಡಿಯುವಂತಾಯಿತು. ಈ ಒಂದು ದೊಡ್ಡ ಸಾಧನೆಯ ಹಿಂದಿರುವ ಎಲ್ಲಾ ನಿಕಟಪೂರ್ವ ಅಧ್ಯಕ್ಷರುಗಳಾದ ಶ್ರೀ ಕೇಶವ ಕಾರಂತರು ಶ್ರೀ ಕಣ್ಣೂರು ರಾಮಚಂದ್ರ ರಾವ್ ಶ್ರೀ ಪಿ ಎಸ್ ಮಧ್ಯಸ್ಥರು ಶ್ರೀ ಭಾಸ್ಕರ ನಾವಡರು ಶೇಷಗಿರಿ ರಾವ್ ಏರ್ಯ ಚಂದ್ರಶೇಖರ ಮಯ್ಯ ಇವರೆಲ್ಲರಿಗೂ ಗೌರವದ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಪ್ರಸ್ತುತ ನನ್ನ ಅಧ್ಯಕ್ಷ ಅವಧಿಯಲ್ಲಿ(2024-27) ನನ್ನ ಹಿಂದಿನವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಾ ಮತ್ತಷ್ಟು ಈಗಿನ ವಿದ್ಯಾಮಾನಕ್ಕನುಗುಣವಾಗಿ ಹೊಸ ಚಿಂತನೆಗಳನ್ನು ಅಳವಡಿಸುತ್ತಾ ಸಂಘಟನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿಕೊಂಡಿರುವೆನು.
ಈಗಾಗಲೇ ಗುರುಪೂರ್ಣಿಮೆ ದಿನದಂದು ನಮ್ಮ ವಲಯದ ಹಿರಿಯ ಪುರೋಹಿತ ವರ್ಗದವರ ಮನೆಗಳಿಗೆ ಹೋಗಿ ಅವರಿಗೆ ಗುರು ವಂದನೆಯನ್ನು ಸಲ್ಲಿಸಿರುವೆವು. ಶಿಕ್ಷಕರ ದಿನದಂದು ಹಿರಿಯ ಶಿಕ್ಷಕರಾದ ಡಾ. ಲೀಲಾ ಉಪಾಧ್ಯಾಯ, ಶ್ರೀಮತಿ ಅನುರಾಧ ರಾವ್, ಡಾ. ಚ.ನಾ. ಶಂಕರ ರಾವ್ ಡಾ.ಸರಸ್ವತಿ ಎಸ್ ರಾವ್ ಇವರುಗಳನ್ನು ಸನ್ಮಾನಿಸಿರುವೆವು. ನಮ್ಮವರು ನಮ್ಮ ಹೆಮ್ಮೆ ವಿಶೇಷ ಕಾರ್ಯಕ್ರಮದಡಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಾದ ಉದ್ದಿಮೆ ಕ್ಷೇತ್ರದ ಏರುಂಬು ನಾರಾಯಣ ಕಾರಂತ, ಸಾಹಿತ್ಯ ಕ್ಷೇತ್ರದ ಶ್ರೀ ನಿತ್ಯಾನಂದ ರಾವ್, ಲೆಕ್ಕ ಪರಿಶೋಧನಾ ಕ್ಷೇತ್ರದ ಕೆ ಪ್ರಕಾಶ್ ಬಾಸ್ತ್ರಿ, ಕಾನೂನು ಕ್ಷೇತ್ರದ ಶ್ರೀ ಜಗದೀಶರಾವ್, ಹೋಟೆಲ್ ಉದ್ಯಮದ ಪತ್ತುಮುಡಿ ಸೂರ್ಯನಾರಾಯಣ ರಾವ್ ಮೊದಲಾದವರಿಗೆ ಕೂಟ ಸಮಾಜದ ಕಣ್ಮಣಿ ಎಂಬ ಬಿರುದನೊಂದಿಗೆ ಸನ್ಮಾನಿಸಿರುತ್ತೇವೆ.
ಉಪಾಕರ್ಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡಿರುತ್ತೇವೆ, ಕೇಂದ್ರ ಸಮಿತಿಯ ವಿನಂತಿ ಮೇರೆಗೆ ಅಂಗ ಸಂಸ್ಥೆಗಳು ಲೆಕ್ಕಪತ್ರವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಲೆಕ್ಕಪತ್ರ ಕಾರ್ಯಾಗಾರ ಆಯೋಜಿಸಿರುತ್ತೇವೆ.
ಶ್ರೀ ಗುರು ನರಸಿಂಹ ಹೋಮವನ್ನು ನರಸಿಂಹ ಸ್ತೋತ್ರ ಪಠಣದ ದೀಕ್ಷೆಯನ್ನು ಪಡೆದುಕೊಂಡು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಮ್ಮಿಕೊಂಡಿರುತ್ತೇವೆ. ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಯುವ ಪ್ರತಿಭೆ ಕುಮಾರಿ ಐಸಿರಿ ಐತಾಳ್ ಇವರಿಗೆ ಬಾಲ ಕಣ್ಮಣಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ವಸಂತ ವೇದ ಪಾಠ ಶಿಬಿರವನ್ನು ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಅದು ಅಲ್ಲದೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇವರು ಆಯೋಜಿಸಿರುವ ಗಾಯತ್ರಿ ಸಂಗಮ ಗಾಯತ್ರಿ ಮಹಾಯಜ್ಞ ಕಾರ್ಯಕ್ರಮಕ್ಕೆ ನಮ್ಮ ಸಂಘ ಸಂಸ್ಥೆಯಿಂದ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿರುವುದು ಅಲ್ಲದೆ ನಮ್ಮ ಎಲ್ಲ ಸದಸ್ಯರು ತ್ರಿಕರಣ ಪೂರ್ವಕವಾಗಿ ಸ್ಪಂದಿಸಿ ಯಶಸ್ಸು ಮಾಡಿಕೊಟ್ಟಿರುತ್ತಾರೆ.
ನಮ್ಮ ಸಮಾಜದ ವಿದ್ಯಾರ್ಥಿಯು ನೀಟ್ ಪರೀಕ್ಷೆಗೆ ಹಾಜರಾದ ಸಮಯದಲ್ಲಿ ಜನಿವಾರವನ್ನು ತೆಗೆಸಿದನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿರುವ ಪ್ರತಿಭಟನಾ ಜಾಥಾದಲ್ಲೂ ನಮ್ಮ ಸದಸ್ಯರು ಸೇರಿ ಯಶಸ್ಸು ಮಾಡಿ ಕೊಟ್ಟಿರುವುದು ಅಭಿನಂದನೀಯ…
ಎಲ್ಲಾ ಸಮಾಜ ಬಾಂಧವರ ಸಹಕಾರವನ್ನು ಮುಂದಿನ ದಿನಗಳಲ್ಲೂ ಯಾಚಿಸುತ್ತಾ.. ನಾವು ಸಮಾಜವನ್ನು ರಕ್ಷಿಸಿದರೆ ಸಮಾಜ ನಮ್ಮನ್ನು ರಕ್ಷಿಸುತ್ತದೆ, ನಾವು ಭಾಷೆಯನ್ನು ರಕ್ಷಿಸಿದರೆ ಭಾಷೆ ನಮ್ಮನ್ನು ರಕ್ಷಿಸುತ್ತದೆ, ನಾವು ದೇಶವನ್ನು ರಕ್ಷಿಸಿದರೆ ದೇಶ ನಮ್ಮನ್ನು ರಕ್ಷಿಸುತ್ತದೆ, ನಾವು ಸಂಸ್ಕೃತಿಯನ್ನು ರಕ್ಷಿಸಿದರೆ ಸಂಸ್ಕೃತಿ ನಮ್ಮನ್ನು ರಕ್ಷಿಸುತ್ತದೆ, ನಾವು ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ, ನಾವು ಸಂಘಟನೆಯನ್ನು ರಕ್ಷಿಸಿದರೆ ಸಂಘಟನೆ ನಮ್ಮನ್ನು ರಕ್ಷಿಸುತ್ತದೆ….
ಶ್ರೀ ಗುರು ನರಸಿಂಹ ದೇವರು ಎಲ್ಲರಿಗೂ ಒಳಿತನ್ನು ಮಾಡಲಿ..
ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಮ್ ಸರ್ವತೋಮುಖಂ |
ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮ್ಯತ್ಯುಂ ನಮಾಮ್ಯಹಂ |
Never miss any important news. Subscribe to our newsletter.
© 2026@ ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಮಂಗಳೂರು ಅಂಗ ಸಂಸ್ಥೆ